ಕನ್ನೆಸೊಪ್ಪು : ಕಮಲ್ಯನೇಸೀ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಸಸ್ಯ. ಇದರ ವೈಜ್ಞಾನಿಕ ನಾಮ ಕಮಲೈನ ಕಮ್ಯೂನಿಸ್. ಹೊಲ ಮತ್ತು ತೋಟಗಳಲ್ಲಿ ಕಳೆಯಂತೆ ಸ್ವಾಭಾವಿಕವಾಗಿ ಬೆಳೆಯುವ ಏಕವಾರ್ಷಿಕ ಸಸ್ಯ ಇದು.

ಇದು ಮೂಲಿಕೆಯ (ಶಾಕ) ರೂಪದಲ್ಲಿ ಸು. 1' ಎತ್ತರಕ್ಕೆ ಬೆಳೆಯುತ್ತದೆ. ನೆಲದಲ್ಲಿಯೇ ಹರಡಿ ಬಹುವಾಗಿ ಕವಲೊಡೆದು ಬೆಳೆಯುವ ಗಿಣ್ಣುಗಳಿಂದ ಕೂಡಿದ ಕಾಂಡವಿದೆ. ಎಲೆಗಳು ಸರಣ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಥವಾ ದೀರ್ಘವೃತ್ತದಂತೆ. ಎಲೆಯ ಅಂಚು ಅಲೆಯಂತಿದೆ. ತುದಿ ಮೊನಚಾಗಿದೆ. ಎಲೆಗಳ ಬುಡವನ್ನು ಪೊರೆಯಂಥ ರಚನೆ ಆವರಿಸಿರುತ್ತದೆ.
ಹೂ ಬಿಡುವ ಕಾಲದಲ್ಲಿ ಕಾಂಡದ ಬುಡದ ಗಿಣ್ಣುಗಳಿಂದ ಹೂಗೊಂಚಲುಗಳು ಮೂಡುತ್ತವೆ. ಅವು ಮಧ್ಯಾರಂಭಿ (ಸೈಮೋಸ್) ಮಾದರಿಯವು. ಹೂ ಗೊಂಚಲನ್ನು ಆಲಿಕೆಯಾಕಾರದ ಕವಚ (ಸ್ಪೇತ್) ಆವರಿಸಿದೆ. ಹೂಗಳು ದ್ವಿಲಿಂಗಿಗಳು; ನೀಲಿ ಬಣ್ಣದವು. ಪುಷ್ಪಪತ್ರಗಳು ಮೂರು, ಬಿಡಿಬಿಡಿಯಾಗಿವೆ. ಹೂದಳಗಳು ಮೂರು. ಇವುಗಳಲ್ಲಿ ಎರಡು ದೊಡ್ಡವು. ಕೆಲವೊಮ್ಮೆ ಮೂರನೆಯ ದಳ ಇಲ್ಲದಿರಬಹುದು. ಕೇಸರಗಳು 3, ಇವುಗಳಲ್ಲಿ ಸಾಮಾನ್ಯವಾಗಿ ಎರಡು ಬರಡು ಕೇಸರಗಳು ಅಂಡಾಶಯ ಉಚ್ಚಸ್ಥಾನದ್ದು (ಸುಪೀರಿಯರ್) ಮೂರು ಕೋಣೆಗಳನ್ನೊಳಗೊಂಡಿದೆ. ಪ್ರತಿಕೋಣೆಯಲ್ಲಿ 1-2 ಅಂಡಕಗಳಿವೆ. ಕೆಲವು ಬಗೆಗಳಲ್ಲಿ ಒಂದು ಕೋಣೆ ಇರುವುದಿಲ್ಲ. ಫಲ ಕೋಣೆಗಭಿಮುಖವಾಗಿ ಒಡೆಯುವಂಥ ಸಂಪುಟ ಮಾದರಿಯದು (ಕ್ಯಾಪ್ಸ್ಯುಲ್).

ಕನ್ನೆಗಿಡದ ಎಳೆಯ ಎಲೆ ಮತ್ತು ಕಾಂಡವನ್ನು ಸೊಪ್ಪು ತರಕಾರಿಯಾಗಿ ಉಪಯೋಗಿಸುತ್ತಾರೆ. ಆಯುರ್ವೇದ ಔಷಧಿಗಳಲ್ಲೂ ಇದರ ಬಳಕೆಯಿದೆ. ಇದು ಜಾನುವಾರುಗಳಿಗೆ ಉತ್ತಮವಾದ ಮೇವೂ ಹೌದು.	(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ